ಕೀರ್ತನೆ. 122. ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ. ರಚನೆಗಾರ: ದಾವೀದ. “ಯೆಹೋವನ ಆಲಯಕ್ಕೆ ಹೋಗೋಣ” ಎಂದು ಜನರು ಹೇಳಿದಾಗ ನನಗೆ ಬಹು ಸಂತೋಷವಾಯಿತು. ನಾವು ಜೆರುಸಲೇಮಿನ ಬಾಗಿಲುಗಳ ಬಳಿಯಲ್ಲಿ ನಿಂತಿದ್ದೇವೆ. ಇದು ಹೊಸ ಜೆರುಸಲೇಮ್! ಈ ಪಟ್ಟಣವು ಏಕೀಕರಣಗೊಂಡ ನಗರದಂತೆ ಮತ್ತೆ ಕಟ್ಟಲ್ಪಟ್ಟಿದೆ. ಇಸ್ರೇಲಿನ ಕುಲಗಳವರು ಅಂದರೆ ಯೆಹೋವನ ಕುಲಗಳವರು ಯೆಹೋವನ ಹೆಸರನ್ನು ಕೊಂಡಾಡಲು ಅಲ್ಲಿಗೆ ಹೋಗುವರು. ದಾವೀದನ ಕುಟುಂಬದ ರಾಜರುಗಳು ಜನರಿಗೆ ನ್ಯಾಯತೀರ್ಪು ನೀಡಲು ತಮ್ಮ ಸಿಂಹಾಸನಗಳನ್ನು ಅಲ್ಲಿ ಸ್ಥಾಪಿಸಿದರು. ಜೆರುಸಲೇಮಿನ ಶಾಂತಿಗೋಸ್ಕರ ಪ್ರಾರ್ಥಿಸಿರಿ: “ನಿನ್ನನ್ನು ಪ್ರೀತಿಸುವ ಜನರು ಅಲ್ಲಿ ಶಾಂತಿಯನ್ನು ಕಂಡುಕೊಳ್ಳಲಿ. ನಿನ್ನ ಕೋಟೆಗಳೊಳಗೆ ಶಾಂತಿ ನೆಲಸಿರಲಿ ನಿನ್ನ ಮಹಾ ಕಟ್ಟಡಗಳಲ್ಲಿ ಸುರಕ್ಷತೆಯಿರಲಿ.” ನನ್ನ ಸಹೋದರರ ಮತ್ತು ನೆರೆಯವರ ಒಳ್ಳೆಯದಕ್ಕಾಗಿ ಅಲ್ಲಿ ಶಾಂತಿ ನೆಲೆಸಿರಲೆಂದು ಪ್ರಾರ್ಥಿಸುವೆನು. ನಮ್ಮ ದೇವರಾದ ಯೆಹೋವನ ಆಲಯಕ್ಕೋಸ್ಕರ ಈ ಪಟ್ಟಣಕ್ಕೆ ಒಳ್ಳೆಯದಾಗಲೆಂದು ಪ್ರಾರ್ಥಿಸುವೆನು.