ಕೀರ್ತನೆ. 47. ರಚನೆಗಾರರು: ಕೋರಹೀಯರು. ಸರ್ವಜನಾಂಗಗಳೇ, ಚಪ್ಪಾಳೆ ತಟ್ಟಿರಿ; ದೇವರಿಗೆ ಆನಂದಘೋಷ ಮಾಡಿರಿ! ಮಹೋನ್ನತನಾದ ಯೆಹೋವನು ಭಯಂಕರನಾಗಿದ್ದಾನೆ. ಆತನು ಭೂಲೋಕಕ್ಕೆಲ್ಲಾ ಮಹಾರಾಜನಾಗಿದ್ದಾನೆ. ಆತನು ಜನಾಂಗಗಳನ್ನು ಸೋಲಿಸಲು ನಮಗೆ ಸಹಾಯಮಾಡಿ ಅವುಗಳನ್ನು ನಮಗೆ ಅಧೀನಪಡಿಸಿದ್ದಾನೆ. ದೇವರು ಈ ದೇಶವನ್ನು ನಮಗೋಸ್ಕರವಾಗಿ ಆರಿಸಿಕೊಂಡನು; ತನಗೆ ಪ್ರಿಯರಾದ ಯಾಕೋಬನ ವಂಶಸ್ಥರಿಗಾಗಿ ಆತನು ಮನೋಹರವಾದ ಈ ದೇಶವನ್ನು ಆರಿಸಿಕೊಂಡನು. ಯೆಹೋವನು ಆನಂದಘೋಷದೊಡನೆಯೂ ತುತ್ತೂರಿಗಳ ಧ್ವನಿಯೊಡನೆಯೂ ಸಿಂಹಾಸನಾರೂಢನಾಗುವನು. ದೇವರನ್ನು ಸಂಕೀರ್ತಿಸಿರಿ, ಕೀರ್ತಿಸಿರಿ. ನಮ್ಮ ರಾಜನನ್ನು ಸಂಕೀರ್ತಿಸಿರಿ, ಸಂಕೀರ್ತಿಸಿರಿ. ದೇವರು ಇಡೀಲೋಕಕ್ಕೆ ರಾಜನಾಗಿದ್ದಾನೆ; ಆತನಿಗೆ ಸ್ತುತಿಗೀತೆಗಳನ್ನು ಹಾಡಿರಿ. ದೇವರು ತನ್ನ ಪರಿಶುದ್ಧ ಸಿಂಹಾಸನದ ಮೇಲೆ ಕುಳಿತುಕೊಂಡಿದ್ದಾನೆ; ದೇವರು ಎಲ್ಲಾ ಜನಾಂಗಗಳನ್ನು ಆಳುವನು. ಜನಾಂಗಗಳ ನಾಯಕರು ಅಬ್ರಹಾಮನ ದೇವಜನರೊಡನೆ ಕೂಡಿಬರುವರು. ಎಲ್ಲಾ ಜನಾಂಗಗಳ ಎಲ್ಲಾ ನಾಯಕರುಗಳು ದೇವರಿಗೆ ಅಧೀನರಾಗಿದ್ದಾರೆ. ದೇವರು ಅವರಿಗೆ ಸರ್ವಾಧಿಕಾರಿ!