ಕೀರ್ತನೆ. 6. ರಚನೆಗಾರ: ದಾವೀದ. ಯೆಹೋವನೇ, ಕೋಪದಿಂದ ನನ್ನನ್ನು ಶಿಕ್ಷಿಸಬೇಡ; ರೋಷದಿಂದ ನನ್ನನ್ನು ದಂಡಿಸಬೇಡ. ಯೆಹೋವನೇ, ನನ್ನನ್ನು ಕನಿಕರಿಸು! ನಾನು ರೋಗಿಯಾಗಿದ್ದೇನೆ, ಬಲಹೀನನಾಗಿದ್ದೇನೆ, ನನ್ನನ್ನು ಗುಣಪಡಿಸು! ನನ್ನ ಎಲುಬುಗಳು ನಡುಗುತ್ತಿವೆ. ನನ್ನ ಇಡೀ ದೇಹ ನಡುಗುತ್ತಿದೆ. ಯೆಹೋವನೇ, ನನ್ನನ್ನು ಗುಣಪಡಿಸಲು ಇನ್ನೆಷ್ಟುಕಾಲ ಬೇಕು? ಯೆಹೋವನೇ, ನನ್ನನ್ನು ಮತ್ತೆ ಬಲಪಡಿಸು! ನಿನ್ನ ಮಹಾಕೃಪೆಯಿಂದ ನನ್ನನ್ನು ರಕ್ಷಿಸು. ಸತ್ತವರು ನಿನ್ನನ್ನು ಜ್ಞಾಪಿಸಿಕೊಳ್ಳುವರೇ? ಸಮಾಧಿಗಳಲ್ಲಿರುವವರು ನಿನ್ನನ್ನು ಸ್ತುತಿಸುವರೇ? ಆದ್ದರಿಂದ ನನ್ನನ್ನು ಗುಣಪಡಿಸು. ಯೆಹೋವನೇ, ರಾತ್ರಿಯೆಲ್ಲಾ ನಿನಗೆ ಪ್ರಾರ್ಥಿಸಿದೆನು. ನನ್ನ ಹಾಸಿಗೆಯು ನನ್ನ ಕಣ್ಣೀರಿನಿಂದ ಒದ್ದೆಯಾಗಿದೆ. ನನ್ನ ಹಾಸಿಗೆಯಿಂದ ಕಣ್ಣೀರು ತೊಟ್ಟಿಕ್ಕುತ್ತಿದೆ. ನಾನು ಅತ್ತು ಗೋಳಾಡಿ ಬಲಹೀನನಾಗಿದ್ದೇನೆ. ನನ್ನ ವೈರಿಗಳು ನನಗೆ ಅನೇಕ ತೊಂದರೆಗಳನ್ನು ಮಾಡಿರುವುದರಿಂದ ನನಗೆ ದುಃಖವೂ ಗೋಳಾಟವೂ ಉಂಟಾಗಿವೆ. ನನ್ನ ಕಣ್ಣುಗಳು ಬಲಹೀನಗೊಂಡಿವೆ; ಅತ್ತತ್ತು ಆಯಾಸಗೊಂಡಿವೆ. ದುಷ್ಟರೇ, ತೊಲಗಿಹೋಗಿರಿ. ಯಾಕೆಂದರೆ ಯೆಹೋವನು ನನ್ನ ಗೋಳಾಟಕ್ಕೆ ಕಿವಿಗೊಟ್ಟಿದ್ದಾನೆ. ಯೆಹೋವನು ನನ್ನ ವಿಜ್ಞಾಪನೆಯನ್ನು ಕೇಳಿದ್ದಾನೆ. ಆತನು ನನ್ನ ಪ್ರಾರ್ಥನೆಯನ್ನು ಸ್ವೀಕರಿಸಿ ಸದುತ್ತರವನ್ನು ದಯಪಾಲಿಸುವನು. ನನ್ನ ವೈರಿಗಳೆಲ್ಲ ಗಲಿಬಿಲಿಗೊಂಡು ನಿರಾಶರಾಗುವರು. ಇದ್ದಕ್ಕಿದ್ದಂತೆ ಅವಮಾನಿತರಾಗಿ ಹಿಂತಿರುಗುವರು.